ಉಪ್ಪುಂದ: ಸಮುದ್ರದ ಅಲೆಗಳ ಅಬ್ಬರಕ್ಕೆ ಮಗುಚಿದ ದೋಣಿ

ಉಪ್ಪುಂದ ನಿವಾಸಿಗಳಾದ ಚಂದ್ರ ಖಾರ್ವಿ, ಪ್ರಮೋದ್, ಪ್ರಜ್ವಲ್, ಗೌತಮ್, ಭಾಸ್ಕರ್, ಯೋಗಿರಾಜ್, ಗೋವಿಂದ, ಬಾಬು ಖಾರ್ವಿ ಮತ್ತು ದೀಪಕ್ ಅಪಾಯದಿಂದ ಪಾರಾದ ಮೀನುಗಾರರು.

ಉಪ್ಪುಂದ: ಸಮುದ್ರದ ಅಲೆಗಳ ಅಬ್ಬರಕ್ಕೆ ಮಗುಚಿದ ದೋಣಿ

ಬೈಂದೂರು, ಆಗಸ್ಟ್ 03, 2025: ಬೈಂದೂರು ತಾಲೂಕಿನ ಉಪ್ಪುಂದ ಮಡಿಕಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರ ಕಡಲತೀರದಲ್ಲಿ ರವಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಸಮುದ್ರದ ಭಾರೀ ಅಲೆಗೆ ಸಿಲುಕಿದ ಮೀನುಗಾರಿಕಾ ದೋಣಿಯೊಂದು ಮಗುಚಿ ಬಿದ್ದ ಘಟನೆ ನಡೆದಿದೆ. ದೋಣಿಯಲ್ಲಿದ್ದ 9 ಮೀನುಗಾರರು ಲೈಫ್ ಜಾಕೆಟ್ ಧರಿಸಿದ್ದರಿಂದ ಸುರಕ್ಷಿತವಾಗಿ ದಡ ಸೇರಿದ್ದಾರೆ.

ಉಪ್ಪುಂದ ನಿವಾಸಿಗಳಾದ ಚಂದ್ರ ಖಾರ್ವಿ, ಪ್ರಮೋದ್, ಪ್ರಜ್ವಲ್, ಗೌತಮ್, ಭಾಸ್ಕರ್, ಯೋಗಿರಾಜ್, ಗೋವಿಂದ, ಬಾಬು ಖಾರ್ವಿ ಮತ್ತು ದೀಪಕ್ ಅಪಾಯದಿಂದ ಪಾರಾದ ಮೀನುಗಾರರು. ಇವರು ಉಪ್ಪುಂದದ ಶಾರದಾ ಖಾರ್ವಿ ಅವರ ಮಾಲೀಕತ್ವದ ಶಿವಪ್ರಸಾದ್ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಮಡಿಕಲ್ ಎಲ್.ಪಿ. ಸಮೀಪ ಸಮುದ್ರದ ರಭಸಕಾರಿ ಅಲೆಗಳಿಗೆ ದೋಣಿ ಮಗುಚಿ ಬಿದ್ದಿದೆ ಎಂದು ತಿಳಿದುಬಂದಿದೆ.

ಘಟನೆಯಿಂದ ದೋಣಿಯಲ್ಲಿದ್ದ ಎಲ್ಲ 9 ಮೀನುಗಾರರು ಸಮುದ್ರದ ನೀರಿಗೆ ಬಿದ್ದರೂ, ಲೈಫ್ ಜಾಕೆಟ್‌ಗಳ ಕಾರಣದಿಂದ ಈಜಿಕೊಂಡು ಸುರಕ್ಷಿತವಾಗಿ ಉಳಿದರು. ದಡದಲ್ಲಿದ್ದ ಇತರ ಮೀನುಗಾರರು ತಕ್ಷಣ ರೋಪ್‌ನ ಸಹಾಯದಿಂದ ಅವರನ್ನು ದಡಕ್ಕೆ ಕರೆತಂದರು. ಆದರೆ, ದೋಣಿಯ ಎಂಜಿನ್, ಬಲೆ ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಸಲಕರಣೆಗಳು ಈ ಘಟನೆಯಲ್ಲಿ ನಷ್ಟವಾಗಿವೆ. ದೋಣಿಗೂ ಗಂಭೀರ ಹಾನಿಯಾಗಿದೆ ಎಂದು ವರದಿಯಾಗಿದೆ.

ಕರಾವಳಿ ಕಾವಲು ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಬ್ರಹ್ಮಣ್ಯ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಘವೇಂದ್ರ ದೇವಾಡಿಗ, ಈಶ್ವರ್, ನಾಗೇಶ್, ಸತೀಶ್, ರಮೇಶ್, ವಿಜಯ್ ಹಾಗೂ ಕೆಎನ್‌ಡಿ ಸಿಬ್ಬಂದಿಗಳಾದ ಗಿರೀಶ್ ಮತ್ತು ಜಯರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯ ಕುರಿತು ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ